ನರಸಿಂಹ ಸರಸ್ವತಿ
	1378-1458. ಮಹಾರಾಷ್ಟ್ರದ ದತ್ತಾವತಾರೀ ಸಂತ. ಬಾಲ್ಯದ ಹೆಸರು ಶಾಲಗ್ರಾಮದೇವ. ದತ್ತಾತ್ರೇಯ ಹಾಗೂ ಶ್ರೀಪಾದ ಶ್ರೀವಲ್ಲಭರ ಅವತಾರವೆನ್ನಲಾಗಿದೆ. ಗುರುಚರಿತ್ರೆ ಎಂಬ ಗ್ರಂಥದಲ್ಲಿ ಈತನ ವಿಷಯ ಬಂದಿದೆ.

	ವಾಜಸನೇಯ ಬ್ರಾಹ್ಮಣವಂಶದ ವಾಸಿಷ್ಠ ಗೋತ್ರದ ಕಾಳೇ ಮನೆತನದವನಾದ ಈತ ಹುಟ್ಟಿದ್ದು ವರ್ಹಾಡದಲ್ಲಿನ ಲಾಡಕಾರಂಜೆ ಗ್ರಾಮದಲ್ಲಿ. ತಂದೆ ತಾಯಿಯರು ಮಾಧಮ ಹಾಗೂ ಅಂಬಾಭವಾನಿ. ಹುಟ್ಟಿದ ದಿನದಿಂದಲೇ ಓಂಕಾರೋಚ್ಚಾರ ಮಾಡುತ್ತಿದ್ದನೆಂದು ಪ್ರತೀತಿ. ಇದನ್ನು ಕಂಡ ಜೋಯಿಸರು ಈ ವ್ಯಕ್ತಿ ಮುಂದೆ ಜಗದ್ವಂದ್ಯನಾಗುತ್ತಾನೆಂದು ಜಾತಕ ಬರೆದರು. ನರಹರಿ ಏಳು ವರ್ಷದವನಾಗುವವರೆಗೆ ಮಾತನ್ನೇ ಆಡದೆ ಮೂಕನಂತಿದ್ದ. ಈತ ಉಪನಯನ ಸಂದರ್ಭದಲ್ಲಿ ತಾಯಿಯ ಹತ್ತಿರ ಭಿಕ್ಷೆ ಬೇಡುವಾಗ ವೈದಿಕ ಸಂಸ್ಕøತದಲ್ಲಿ ಮಾತನಾಡಿದ. ಸ್ವಲ್ಪಕಾಲದಲ್ಲೆ ಈತ ವಿರಕ್ತನಾಗಿ ಮನೆ ಬಿಟ್ಟು ಹೊರಟ. ಬದರಿ, ಕೇದಾರಗಳ ಯಾತ್ರೆ ಕೈಗೊಂಡು ನಡುವೆ ಕಾಶಿಯಲ್ಲಿ ಕೆಲದಿನ ತಂಗಿದ. ಕೃಷ್ಣ ಸರಸ್ವತಿ ಎಂಬ ಒಬ್ಬ ಸಂನ್ಯಾಸಿಯಿಂದ ಸಂನ್ಯಾಸದೀಕ್ಷೆ ಪಡೆದು ಮುನಿಜನರೊಂದಿಗೆ ಉತ್ತರ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಿದ. ಹುಟ್ಟೂರಿಗೆ ಬಂದು ಮಾತಾಪಿತೃಗಳ ಭೇಟಿಯಾದ. ಅನಂತರ ಈತ ಔದುಂಬರ, ನರಸೋಬವಾಡಿ (ನೋಡಿ- ನರಸೋಬವಾಡಿ) ಮತ್ತು ಗಾಣಗಾಪುರ ಎಂಬ ಮೂರು ಸ್ಥಳಗಳಲ್ಲಿ ಬಹಳ ಕಾಲ ನೆಲಸಿ ನಿಂತ.

	ಸಾತಾರ ಜಿಲ್ಲೆಯಲ್ಲಿ ಕೃಷ್ಣಾತೀರದಲ್ಲಿನ ಅಂಕಲ್‍ಕೊಪ್ ಎಂಬ ಸ್ಥಳದಲ್ಲಿನ ಒಂದು ಔದುಂಬರ ವೃಕ್ಷದ ಅಡಿ ಈತ ಜನಾರ್ದನಸ್ವಾಮಿಗೆ ಆಧ್ಯಾತ್ಮಿಕ ವಿಷಯಗಳನ್ನು ಬೋಧಿಸಿ ದಿವ್ಯಜೀವನದ ದಾರಿಯನ್ನು ತೋರಿದ. ಅನಂತರ ನರಸೋಬವಾಡಿಯಲ್ಲಿ ಹನ್ನೆರಡು ವರ್ಷ ಮತ್ತು ಗಾಣಗಾಪುರದಲ್ಲಿ ಇಪ್ಪತ್ತು ನಾಲ್ಕು ವರ್ಷ ನಿಂತ. ಗಾಣಗಾಪುರದಲ್ಲಿದ್ದಾಗ ಹಲವು ಪವಾಡಗಳನ್ನು ಮೆರೆದ. 

	ಯವನಸೇನೆಯಲ್ಲಿದ್ದ ಸಾಯಂದೇವ ಎಂಬ ಒಬ್ಬ ಬ್ರಾಹ್ಮಣನನ್ನು ತನ್ನ ಶಿಷ್ಯನನ್ನಾಗಿ ಮಾಡಿಕೊಂಡ; ಆಮೇಲೆ ಆತ ಆಗಿನ ಕಾಲದ ಅನೇಕ ಪ್ರಕಾಂಡ ಪಂಡಿತರ ಗರ್ವವನ್ನು ಮುರಿದ. ಇದೇ ಸಮಯದಲ್ಲಿ ಬಹಮನೀ ದೊರೆ ಎರಡನೆಯ ಅಲ್ಲಾವುದ್ದೀನ್ ನರಸಿಂಹ ಸರಸ್ವತಿಯನ್ನು ಬೀದರ್‍ನಲ್ಲಿಯ ತನ್ನ ಅರಮನೆಗೆ ಕರೆದುಕೊಂಡು ಹೋಗಿ ಪೂಜಿಸಿ ಸತ್ಕರಿಸಿದ. ಅನಂತರ ಯಾತ್ರೆ ಹೊರಟ ನರಸಿಂಹ ಸರಸ್ವತಿ ಮತ್ತೆ ನಾಸಿಕ್ ಮತ್ತು ತ್ರ್ಯಂಬಕೇಶ್ವರಗಳಿಗೆ ಹೋಗಿ ಹಿಂತಿರುಗಿ ಗಾಣಗಾಪುರಕ್ಕೆ ಬಂದು ಅಲ್ಲಿಂದ ಶ್ರೀಶೈಲಕ್ಕೆ ಹೋಗಿ ಅಲ್ಲಿ ಪಾತಾಳಗಂಗೆಯಲ್ಲಿ ದೇಹವನ್ನು ವಿಸರ್ಜಿಸಿದ.

	ನರಸಿಂಹ ಸರಸ್ವತಿ ಖ್ಯಾತ ದತ್ತಾತ್ರೇಯೋಪಾಸಕನಾಗಿದ್ದ. ದತ್ತಪೂಜೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿಗೂ ಲೋಕಪ್ರಿಯವಾಗಿದೆ.			
			
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ